ಪ್ರಚಲಿತ

ಬೇಕಾಬಿಟ್ಟಿ ಮಾತನಾಡುವ ರಾಹುಲ್ ಗಾಂಧಿಗೆ ಮಾನಸಿಕ ತೊಂದರೆ ಇದೆ: ಪ್ರಲ್ಹಾದ್ ಜೋಶಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಮಾನಸಿಕ ಸಮಸ್ಯೆ ಆದಂತಿದೆ. ಇದೇ ಕಾರಣಕ್ಕೆ ಆ ವ್ಯಕ್ತಿ ದೇಶ ವಿದೇಶಗಳಲ್ಲಿ ಭಾರತದ ಬಗ್ಗೆ ಬೇಕಾಬಿಟ್ಟಿ ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇಂಗ್ಲೆಂಡ್, ಅಮೆರಿಕ ಮೊದಲಾದ ಕಡೆಗಳಲ್ಲಿ ಸಂ ಚಲಿಸುತ್ತಿರುವ ರಾಹುಲ್ ಗಾಂಧಿ ಅತ್ಯಂತ ಕೆಳಮಟ್ಟದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮಾತನಾಡುವಾಗ ಅವರ ಮೈಕ್ ಆಫ್ ಆಗುವುದಾಗಿ ಹೇಳಿದ್ದಾರೆ. ನಿಜ ಹೇಳಬೇಕೆಂದರೆ ಜನರೇ ಅವರ ಮೈಕ್ ಗಳನ್ನು ಆಫ್ ಮಾಡುತ್ತಿದ್ದಾರೆ ಎಂದು ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಹುಲ್ ಭಯೋತ್ಪಾದಕರನ್ನು ಭೇಟಿ ಮಾಡಿದ್ದಾಗಿ ಹೇಳುತ್ತಾರೆ. ಉಗ್ರರೇನು ಅವರ ಸಂಬಂಧಿಕರೇ?. ಭಯೋತ್ಪಾದಕರ ಜೊತೆ ಸಂಬಂಧ ಇದೆ ಎಂದಾದರೆ, ಅವರ ತಂದೆಯವರ ಜೊತೆ ಸಂಬಂಧ ಸರಿ ಇರಲಿಲ್ಲ ಎಂದು ಅರ್ಥವೇ ಎಂದು ಪ್ರಶ್ನಿಸಿದ್ದಾರೆ. ಅವರ ಜೋಡೋ ಯಾತ್ರೆಯಲ್ಲಿ ಭಯೋತ್ಪಾದಕರನ್ನು ಕಂಡಿದ್ದರು ಎಂದಾದರೆ ಅವರೇಕೆ ದೂರು ನೀಡಲಿಲ್ಲ ಎಂದು ಜೋಶಿ ಪ್ರಶ್ನಿಸಿದ್ದಾರೆ.

ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಮಾಡಿದ್ದೇನು?, ಇಡೀ ಮಂತ್ರಿ ಮಂಡಲದ ನಿರ್ಣಯವನ್ನು ಹರಿದು ಹಾಕಿಲ್ಲವೇ?. ಇವರ ಅಜ್ಜಿ ಇಂದಿರಾ ಗಾಂಧಿ ಅವರು ಹೇರಿದ್ದ ತುರ್ತು ಪರಿಸ್ಥಿತಿಯನ್ನು ರಾಹುಲ್ ಮರೆತು ಹೋದ ಹಾಗಿದೆ. ರಾಹುಲ್‌ಗೆ ಮಾನಸಿಕ ಸಮಸ್ಯೆ ಇದೆ. ವೈದ್ಯರಿಗೆ ತೋರಿಸುವ ಅವಶ್ಯಕತೆ ಇದೆ ಎಂದು ಜೋಶಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Tags

Related Articles

Close