ಅಂಕಣ

ಕೇಂದ್ರ ಸರಕಾರದಿಂದ ಮೊಬೈಲ್ ಕಳ್ಳರಿಗೆ ಬಿತ್ತು ಕಡಿವಾಣ!! ಐಎಂಇಐ ನಂಬರ್ ತಿರುಚಲು ಹೋದರೆ ಕಂಬಿ ಎಣಿಸೋದು ಗ್ಯಾರಂಟಿ!

ಮೊಬೈಲ್‍ಗಳ ಐಎಂಇಐ ಸಂಖ್ಯೆ ಅಂದರೆ 15 ಅಂಕಿಗಳ ಸೀರಿಯಲ್ ನಂಬರ್ ಏನಾದರೂ ಬದಲಾಯಿಸಲು ಅಥವಾ ತಿರುಚಲು ಹೋದರೆ ಕಂಬಿ ಎಣಿಸುವುದು ಖಚಿತ.!!ಹೆಚ್ಚುತ್ತಿರುವ ಮೊಬೈಲ್ ಹಾಗೂ ಮೊಬೈಲ್ ದುರ್ಬಳಕೆ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಿರುವ ಕೇಂದ್ರ ಸರಕಾರ ಮೊಬೈಲ್‍ನ ವಿಶಿಷ್ಟ ಗುರುತಿನ ಐಎಂಇಐ ಸಂಖ್ಯೆಯನ್ನು ತಿರುಚುವುದನ್ನು ಗಂಭೀರ ಅಪರಾಧವಾಗಿ ಪರಿಗಣಿಸಿದೆ.

ಮೊಬೈಲ್ ಕಳ್ಳತನ ಮಾಡಿದ ಬಳಿಕ ಖದೀಮರು ಅದರ ಐಎಂಇಐ ಸಂಖ್ಯೆಯನ್ನು ತಿರುಚುವ ಮೂಲಕ ಮೊಬೈಲ್ ಫೋನ್ ಮೇಲೆ ತನಿಖಾ ಸಂಸ್ಥೆಗಳು ನಿಗಾ ಇಡುವಂತೆ ಮಾಡುತ್ತಿದ್ದಾರೆ. ಇಂತಹ ದುಷ್ಕಮಿಗಳನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ದೂರ ಸಂಪರ್ಕ ಇಲಾಖೆ ಆಗಸ್ಟ್ 25ರಂದು ಅಧಿಸೂಚನೆಯೊಂದನ್ನು ಹೊರಡಿಸಿದ್ದು, ಅದರನ್ವಯ ಪ್ರತೀ ಮೊಬೈಲ್ ಫೋನ್‍ಗಳಿಗೂ ಇರುವ ಅಂಕೆಗಳ ವಿಶಿಷ್ಟ ಐಎಂಇಐ ಸಂಖ್ಯೆ ತಿರುಚುವವರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶ ಕಲ್ಪಿಸಿದೆ.

ಹೀಗಾಗಿ ಮೊಬೈಲ್ ತಯಾರಕರನ್ನು ಹೊರತುಪಡಿಸಿ ಬೇರೆ ಯಾವುದೇ ವ್ಯಕ್ತಿ ಐಎಂಇಐ ಸಂಖ್ಯೆಯನ್ನು ಅಳಿಸುವುದು, ನಾಶಪಡಿಸುವುದು, ಬದಲಾವಣೆ ಮಾಡುವುದು ಅಕ್ರಮ ಎಂದು ಅಧಿ ಸೂಚನೆಯಲ್ಲಿ ತಿಳಿಸಲಾಗಿದೆ. ಅಂತೆಯೇ ತಿರುಚಲ್ಪಟ್ಟ ಐಎಂಇಐ ಸಂಖ್ಯೆಯನ್ನು ಹೊಂದಿರುವ ಮೊಬೈಲ್ ಅನ್ನೂ ಕೂಡಾ ಬಳಕೆ ಮಾಡಬಾರದು ಎಂದು ಕೇಂದ್ರ ಸರಕಾರ ಎಚ್ಚರಿಕೆ ನೀಡಿದ್ದು, ಐಎಂಇಐ ಸಂಖ್ಯೆ ಅಕ್ರಮವಾಗಿ ತಿರುಚಲ್ಪಟ್ಟಿರುವುದು ಗೊತ್ತಿದ್ದರೆ ಯಾವುದೇ ವ್ಯಕ್ತಿ ಅಂತಹ ಮೊಬೈಲ್ ಬಳಸಕೂಡದು ಎಂದು ಉಪಕರಣದ ಗುರುತಿನ ಸಂಖ್ಯೆ ತಿರುಚುವುದನ್ನು ತಡೆಯುವ ನಿಯಮ-2017 ಹೇಳುತ್ತದೆ.

ಸಿಮ್ ಬದಲಾವಣೆ ಮಾಡುವ ಮೂಲಕ ಮೊಬೈಲ್ ಸಂಖ್ಯೆ ಬದಲಿಸಬಹುದು. ಆದರೆ ಐಎಂಇಐ ಸಂಖ್ಯೆಯನ್ನು ತಂತ್ರಜ್ಞಾನದಲ್ಲಿ ನಿಪುಣನಾದ ವ್ಯಕ್ತಿ ವಿಶೇಷ ಉಪಕರಣಗಳಿಂದ ಮಾತ್ರ ಬದಲಿಸಬಹುದಾಗಿದೆ.

ಪ್ರತೀ ಮೊಬೈಲ್‍ಗಳಿಗೂ ಜಿಎಸ್‍ಎಂಎ ಎಂಬ ಜಾಗತಿಕ ಸಂಸ್ಥೆ ಹಾಗೂ ಅದರಿಂದ ಮಾನ್ಯತೆ ಪಡೆದ ಸಂಸ್ಥೆಗಳು ಐಎಂಇಐ ಸಂಖ್ಯೆಯನ್ನು ಮಂಜೂರು ಮಾಡುತ್ತವೆ. ಒಂದು ವೇಳೆ ಮೊಬೈಲ್ ಕಳೆದು ಹೋದರೆ, ಅದನ್ನು ಪತ್ತೆ ಹೆಚ್ಚಲು ಈ ಸಂಖ್ಯೆ ನೆರವಾಗುತ್ತದೆ. ಇದೇ ಕಾರಣಕ್ಕೆ ಮೊಬೈಲ್‍ಗಳಿಗೆ ಈ ವಿಶಿಷ್ಟ ಸಂಖ್ಯೆ ಅತ್ಯವಶ್ಯಕವಾಗಿದ್ದು, ಇತ್ತೀಜಿನ ದಿನಗಳಲ್ಲಿ ಖದೀಮರು ಈ ಸಂಖ್ಯೆಯನ್ನೇ ತಿರುಚಿ, ಬೇರೊಂದು ಸಂಖ್ಯೆಯನ್ನು ನಿಗದಿ ಮಾಡಿ ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ಇದರಿಂದ ಕಳವಾದ ಮೊಬೈಲ್ ಪತ್ತೆ ಹಚ್ಚುವುದು ಕಷ್ಟವಾಗುತ್ತಿದೆ. ಅಲ್ಲದೆ ಹೀಗೆ ಕಳವಾಗಿ ವಿಶಿಷ್ಟ ಸಂಖ್ಯೆ ತಿರುಚಲ್ಪಟ್ಟ ಮೊಬೈಲ್‍ಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದ್ದು, ಇದು ಹಲವು ಪ್ರಕರಣಗಳಲ್ಲಿ ಸಾಬೀತಾಗಿದೆ.

ಇದೇ ವೇಳೆ, ಕಳುವಾದ ಅಥವಾ ಕಳೆದು ಹೋದ ಮೊಬೈಲ್ ಫೋನ್‍ಗಳ ಸಿಮ್ ಕಾರ್ಡ್ ತೆಗೆಯುತ್ತಿದ್ದಂತೆ ಅಥವಾ ಐಎಂಇಐ ಸಂಖ್ಯೆ ಬದಲಿಸುತ್ತಿದ್ದಂತೆ ಅದನ್ನು ನಿಷ್ಕ್ರೀಯಗೊಳಿಸುವ ವ್ಯವಸ್ಥೆಯೊಂದನ್ನು ಜಾರಿಗೆ ತರುವ ನಿಟ್ಟಿನಲ್ಲಿ ದೂರಸಂಪರ್ಕ ಇಲಾಖೆ ಕಾರ್ಯೋನ್ಮುಖವಾಗಿದೆ.

ಮೂಲಗಳ ಪ್ರಕಾರ ಒಂದೇ ಐಎಂಇಐ ಸಂಖ್ಯೆ ಹೊಂದಿದ ಹೊಂದಿದ 15 ಸಾವಿರಕ್ಕೂ ಹೆಚ್ಚು ಮೊಬೈಲ್‍ಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಮಾಹಿತಿಯನ್ನು ದೂರ ಸಂಪರ್ಕ ಜಾರಿ ಸಂಪನ್ಮೂಲ ಹಾಗೂ ನಿಗಾ ಕೋಶ ಪತ್ತೆ ಹಚ್ಚಿದೆ. ಕೇಂದ್ರ ಸರಕಾರದ ಈ ನಿರ್ಧಾರ ಪೊಬೈಲ್ ಕಳ್ಳರಿಗೆ ಕಡಿವಾಣ ಹಾಕಲಿದೆ.!!

-ಶೃಜನ್ಯಾ

Tags

Related Articles

Close