ಅಂಕಣ

“ಮುಸಲ್ಮಾನರ ಬದುಕಿಗೆ ಕೊಳ್ಳಿ ಇಡುವ ಇಸ್ಲಾಂ ನ ಫತ್ವಾವನ್ನು ಧರ್ಮ ಎನ್ನಲಾಗುವುದಿಲ್ಲ” : ಅಶ್ರಫ್ ಅಬ್ಬಾಸ್!

ಇಸ್ಲಾಂನ ಶೆರಿಯಾ ಕಾನೂನಿನ ವಿರುದ್ಧವಾಗಿ ಹೋಗುವವರಿಗೆ ಫತ್ವಾ ಹೊರಡಿಸಲಾಗುತ್ತದೆ. ಈ ಫತ್ವಾ ಎನ್ನುವುದೇ ಹಾಸ್ಯಾಸ್ಪದ ಮತ್ತು ಘನಘೋರವಾಗಿರುತ್ತದೆ. ಫತ್ವಾಗಳೆಂದರೆ ಇಸ್ಲಾಮಿಕ್ ಶಾಸನಾತ್ಮಕ ಅಭಿಪ್ರಾಯಗಳು ಅಥವಾ ಮೌಲ್ವಿಗಳ ಆದೇಶಗಳು. ಅದನ್ನು ಪಾಲಿಸಲೇಬೇಕು. ಪಾಲಿಸದಿದ್ದರೆ ಅಂಥವರಿಗೆ ಖಂಡಿತಾ ಶಿಕ್ಷೆ ತಪ್ಪುವುದಿಲ್ಲ. ಫತ್ವಾ ಹೊರಡಿಸುವುದು ಕಾನೂನು ಬಾಹಿರ ಎಂದು ಸುಪ್ರೀಂ ಕೋರ್ಟ್ ಘೋಷಿಸಿದೆ. ಆದರೂ ಫತ್ವಾ ಹೊರಡಿಸುವುದು ಮಾತ್ರ ನಿಲ್ಲುತ್ತಿಲ್ಲ. ವಿಚಿತ್ರ ರೀತಿಯ ಫತ್ವಾ ಹೊರಡಿಸುವ ಈ ಮುಲ್ಲಾಗಳ ಮೆಂಟಾಲಿಟಿ ಹೇಗಿರಬಹುದು ಎಂದು ಯೋಚಿಸುವಾಗಲೇ ಅಚ್ಚರಿ ಎನಿಸುತ್ತದೆ.

ಸುಪ್ರೀಂ ಕೋರ್ಟ್ ಫತ್ವಾ ವಿರುದ್ಧ ಸ್ಪಷ್ಟವಾದ ವ್ಯಾಖ್ಯಾನಿಸಿ, ಮುಸ್ಲಿಂ ಧಾರ್ಮಿಕ ನಾಯಕರು ನಡೆಸುವ ಶರಿಯತ್ ನ್ಯಾಯ ಪಂಚಾಯತ್ ದಾರುಲ್ ಖ್ವಾಜಾ ಹಾಗೂ ಅವು ಹೊರಡಿಸುವ ಫತ್ವಾಗಳಿಗೆ ಕಾನೂನಿನ ಮಾನ್ಯತೆ ಇಲ್ಲ ಎಂದಿದೆ. ಆದ್ದರಿಂದ ಫತ್ವಾಗಳನ್ನು ಜಾರಿಗೊಳಿಸಲು ಬಲ ಪ್ರಯೋಗಿಸುವಂತಿಲ್ಲ. ಯಾರಾದರೂ ಬಲವಂತವಾಗಿ ಯತ್ನಿಸಿದರೆ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವ ಅವಕಾಶವಿದೆ.

ಯಾರ ಮೇಲೆ ಫತ್ವಾ ಹೊರಡಿಸಲಾಗುತ್ತದೋ ಅವರು ಮತ್ತೆ ಜೀವದ ಆಸೆಯನ್ನೇ ಬಿಡಬೇಕು. ಇಸ್ಲಾಂ ವಿರುದ್ಧ ಹೋಗುವುದರಿಂದ ಅವರ ಮೇಲೆ ಶೆರಿಯತ್
ಕಾನೂನಿನ ಪ್ರಕಾರ ಉಗ್ರ ಶಿಕ್ಷೆ ನೀಡಿದರೆ ಅದಕ್ಕೆ ಯಾವ ಪಾಪವೂ ಇಲ್ಲ. ಇಂದು ಫತ್ವಾ ಎಂದರೆ ಈಗಿನ ಅನೇಕರು ಕೊಲೆ ಮಾಡಲು ಹೊರಡಿಸಿದ ಫರ್ಮಾನು
ಎಂದು ತಿಳಿದಿದ್ದಾರೆ. ಯಾರ ಮೇಲೆ ಫತ್ವಾ ಬಿದ್ದಿದೆಯೋ ಅವರು ಇಸ್ಲಾಂ ಮತಕ್ಕೆ ವಿರುದ್ಧವಾದ ಕೆಲಸ ಮಾಡಿರುತ್ತಾರೆಂದು ಅವರನ್ನು ಪರಿಹರಿಸಿದರೆ ದೇವರು
ಸಂತುಷ್ಟನಾಗುತ್ತಾನೆ ಎಂದು ಮೂಲಭೂತವಾದಿ ಮುಸ್ಲಿಮರು ಭಾವಿಸಿದ್ದಾರೆ. ಈ ಫತ್ವವನ್ನು ಉಲಾಮರು ಬೇಕಾಬಿಟ್ಟಿಯಾಗಿ ಬಳಸುವುದರಿಂದ ವಿಚಿತ್ರ ಅಲ್ಲದೇ ಅಷ್ಟೇ ಘೋರವಾಗಿರುತ್ತದೆ.

ಫತ್ವಾ ಹೊರಡಿಸಿದ ಧಾರ್ಮಿಕ ಗುರು ಒಬ್ಬ ಮೂಲಭೂತವಾದಿ ಮುಸ್ಲಿಮನಾಗಿದ್ದು, ಆತ ತನಗೆ ತೋಚಿದಂತೆ ಫತ್ವಾ ಹೊರಡಿಸಿ ಇಡೀ ಸಮುದಾಯವನ್ನು
ನಿಯಂತ್ರಿಸುತ್ತಾನೆ. ಆತ ಹೊರಡಿಸುವ ಫತ್ವಾ ತಪ್ಪೆಂದು ವಾದಿಸಲು ಯಾವ ಮುಸ್ಲಿಮನಿಗೂ ಧೈರ್ಯವಿರುವುದಿಲ್ಲ. ಅಲ್ಲದೆ ಫತ್ವಾದ ವಿರುದ್ಧ ಹೋದರೆ
ಧರ್ಮವಿರೋಧಿಯಾಗುತ್ತದೆ. ಇಂಥದೊಂದು ಫತ್ವಾದ ಬಗ್ಗೆ ಮುಸ್ಲಿಂ ಸಮುದಾಯಕ್ಕೆ ಒಲವಿರುವುದರಿಂದ ಇಸ್ಲಾಂ ಬಲಿಷ್ಠವಾದರೆ ಅದನ್ನೆಲ್ಲಾ ಜಾರಿಗೊಳಿಸಲು ಇಲ್ಲಿನ ಮೂಲಭೂತವಾದಿ ಮುಸ್ಲಿಮರು ತುದಿಗಾಗಲಲ್ಲಿ ನಿಂತಿದ್ದಾರೆ.

ಕೆಲವೊಂದು ವಿಚಿತ್ರ ಫತ್ವಾಗಳ ಸ್ಯಾಂಪಲ್ ಇಲ್ಲಿದೆ. ಇದನ್ನು ನೋಡಿದಾಗ ಎಷ್ಟೊಂದು ಅಸಹ್ಯ ಎನಿಸುತ್ತದೆ ಎಂದರೆ ಇದೂ ಒಂದು ಕಾನೂನಾ ಎಂಬ ಶಂಕೆ
ಮೂಡುತ್ತದೆ.

ಉತ್ತರ ಪ್ರದೇಶ ರಾಜ್ಯದ ಮುಜಫರ್‍ನಗರದ ಹತ್ತಿರವಿರುವ ದೇವ್‍ಬಂದ್ ಅನ್ನುವ ಊರನ್ನು ನೋಡಿದರೆ, ತಾಲಿಬಾನ್ ಆಡಳಿತವಿದ್ದ ಅಫಘಾನಿಸ್ತಾನವನ್ನು
ನೋಡುವುದೇ ಬೇಡ! ಅಲ್ಲೊಂದು ಮುಸ್ಲಿಂ ಪಂಚಾಯ್ತಿಯಿದೆ. ತಾಲಿಬಾನ್‍ನಿಂದಲೇ ನೇರವಾಗಿ ಬಂದವರಂತಿದ್ದಾರೆ. ಇಲ್ಲೊಂದು ನಡೆದ ಘಟನೆ ಇಡೀ ನಾಗರಿಕ
ಸಮಾಜವೇ ತಲೆತಗ್ಗಿಸುವಂತಿದೆ. ಇಮ್ರಾನಾ ಎಂಬವಳ ಮೇಲೆ ಆಕೆಯ ಮಾವ ಅತ್ಯಾಚಾರ ಎಸಗಿದ್ದ. ಈ ಪ್ರಕರಣ ಮುಸ್ಲಿಂ ಪಂಚಾಯತ್ ಮೆಟ್ಟಿಲೇರಿ ಅಲ್ಲಿನ
ಮುಖ್ಯಸ್ಥರು ನೀಡಿದ ತೀರ್ಪು ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಿತ್ತು. ಅತ್ಯಾಚಾರಗೊಳಗಾದ ಇಮ್ರನಾ ಅತ್ಯಾಚಾರಗೈದ ಮಾವನ ಜೊತೆಗೆ
ವಾಸಿಸಬೇಕು ಅಂದ್ರೆ ಮದುವೆಯಾಗಬೇಕು. ಗಂಡನನ್ನು ಮತ್ತು ಐದು ಜನ ಮಕ್ಕಳನ್ನು ಬಿಟ್ಟು ತನ್ನ ಮಾವನನ್ನೇ ಮದುವೆಯಾಗಬೇಕು, ಗಂಡನನ್ನು ಇನ್ನು ಮುಂದೆ `ಮಗ’ ನಂತೆ ಕಾಣಬೇಕು ಅನ್ನುವ ಒಂದು ಅನಾಹುತಕಾರೀ ತೀರ್ಪು ಕೊಟ್ಟುಬಿಟ್ಟರು. ಸೊಸೆಯನ್ನು ಮಗಳ ಸಮಾನವಾಗಿ ನೋಡಬೇಕಿದ್ದ ಮಾವ ಇಲ್ಲಿ ಘನಘೋರ ತಪ್ಪೆಸಗಿದ್ದರೂ ಪಂಚಾಯತ್ ಮಾತ್ರ ತಪ್ಪೆಸೆದ ಮಾವನ ಪರವಾಗಿ ತೀರ್ಪು ನೀಡಿತ್ತು. ಇಸ್ಲಾಂನಲ್ಲಿ ಸ್ತ್ರೀಯರಿಗೆ ಬೆಲೆಯೇ ಇಲ್ಲ. ವಿಚಿತ್ರವೆಂದರೆ ತನ್ನದಲ್ಲದ ತಪ್ಪಿಗೆ ಶಿಕ್ಷೆಗೊಳಗಾದ ಇಮ್ರಾನಾಳ ಪರವಾಗಿ ಯಾವುದೇ ಬುದ್ಧಿಜೀವಿಗಳು ತುಟಿಕ್‍ಪಿಟಿಕ್ ಎನ್ನಲೇ ಇಲ್ಲ. ಅಲ್ಲಿನ ಆಗಿನ ಮುಖ್ಯಮಂತ್ರಿಯಾಗಿದ್ದ ಮುಲಾಯಂ ಸಿಂಗ್ ಯಾದವ್ ಈ ತೀರ್ಪಿನ ಬಗ್ಗೆ ಏನೂ ಮಾತಾಡದೆ ಕೈತೊಳೆದುಕೊಂಡು ಬಿಟ್ಟಿದ್ದ.

ಇಂದು ವಿಶ್ವದಲ್ಲೇ ಉಗ್ರರ ವಿರುದ್ಧ ತೊಡೆ ತಟ್ಟಿಕೊಂಡು ನಿಂತಿರುವ ಯೂಸಫ್ಝಾಯಿ ಮಲಾಲಳ ವಿರುದ್ಧ ಹೊರಡಿಸಿದ್ದ ಫತ್ವಾ ನಿಜಕ್ಕೂ ಅಚ್ಚರಿಯಾಗಿದೆ. ಈಕೆ
ಮಾಡಿದ್ದಿಷ್ಟೆ. ಪಾಕಿಸ್ಥಾನದಲ್ಲಿ ಹೆಣ್ಣು ಮಕ್ಕಳೂ ಶಾಲೆಗೆ ಬರಬೇಕೆಂದು ಪ್ರೇರೇಪಿಸಿದ್ದಕ್ಕೆ ಮಲಾಲಾ ಯೂಸಫ್ಝಾಯಿ ವಿರುದ್ಧ ಧರ್ಮ ಗುರು ಶೇಕ್ ಒಮರ್ ಬಕ್ರಿ ಎಂಬಾತ ಫತ್ವಾ ಹೊರಡಿಸಿದ್ದ. ಈತನ ಫತ್ವಾಕ್ಕನುಗುಣವಾಗಿ ಮಲಾಲಾ ಮೇಲೆ ಉಗ್ರರು ಗುಂಡು ಹಾರಿಸಿ, ಆಕೆ ಗಂಭೀರವಾಗಿ ಗಾಯಗೊಂಡಳು. ಅನಂತರ ಆಕೆಗೆ ವಿದೇಶದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಿದ ಮೇಲೆ ಚೇತರಿಸಿಕೊಂಡು ಮತಾಂಧರ ವಿರುದ್ಧ ಗಟ್ಟಿ ಧ್ವನಿಯಲ್ಲಿ ಮಾತಾಡುತ್ತಿದ್ದಾಳೆ.

ಸಾಹಿತಿ ಸಲ್ಮಾನ್ ರಷ್ದಿ ಅವರು “ಸೆಟಾನಿಕ್ ವರ್ಸಸ್” ಎಂಬ ಕೃತಿ ಬರೆದಾಗ ಅವರ ಮೇಲೆ ಫತ್ವಾ ಹೊರಡಿಸಲಾಯಿತು. ಅವರನ್ನು ಕೊಲ್ಲಲೇಬೇಕೆಂದು ಇಸ್ಲಾಂ ಮೂಲಭೂತವಾದಿಗಳು ಹಲವಾರು ಬಾರಿ ಪ್ರಯತ್ನ ಪಟ್ಟರು. ಕೊನೆಗೆ ಇಂಗ್ಲೆಂಡ್ ಸರಕಾರ ಅವರ ಜೀವರಕ್ಷಣೆಗೆ ನಿಲ್ಲಬೇಕಾಯಿತು.

ಗಾಯಕ ಸೋನು ನಿಗಮ್ ಅವರು ನಾನು ಮುಸ್ಲಿಮನಲ್ಲ ಆದರೂ ಅಝಾನ್ ಕೇಳುತ್ತಾ ಎದ್ದೇಳಬೇಕಾ ಯಾವಾಗ ಈ ಧರ್ಮದ ಹೇರಿಕೆ ನಿಲ್ಲುತ್ತದೆ. ಮುಹಮ್ಮದ್
ಇಸ್ಲಾಮನ್ನು ಸ್ಥಾಪಿಸಿದಾಗ ಲೌಡ್ ಸ್ಪೀಕರ್ ಇತ್ತಾ? ಎಂದು ಪ್ರಶ್ನಿಸಿದ್ದರು. ಈ ವೇಳೆ ಪಶ್ಚಿಮ ಬಂಗಾಳ ಅಲ್ಪಸಂಖ್ಯಾತ ಒಕ್ಕೂಟದ ಉಪಾಧ್ಯಕ್ಷರಾದ ಸಯ್ಯದ್ ಶಾ ಅತೀಫ್ ಅಲಿ ಅಲ್ ಖಾದ್ರಿ ಎಂಬಾತ ಫತ್ವಾ ಹೊರಡಿಸಿ, ಸೋನು ನಿಗಮ್ ತಲೆ ಬೋಳಿಸಿ ಮರೆವಣಿಗೆ ಮಾಡಿದರೆ 10 ಲಕ್ಷ ರೂ. ನೀಡುವುದಾಗಿ ಹೇಳಿದ್ದ. ಆಗ ಸೋನು ನಿಗಮ್ ತಲೆ ಬೋಳಿಸಿಕೊಂಡು ಬಂದು ಈ ಹಣವನ್ನು ಕ್ಷೌರಿಕನಿಗೆ ನೀಡುವಂತೆ ಒತ್ತಾಯಿಸಿದ್ದರು. ಆದರೆ ಬಹುಮಾನ ಘೋಷಿಸಿದ್ದ ಖಾದ್ರಿ ಎಲ್ಲೋ ಓಡಿ ಹೋಗಿದ್ದ.

ಅಸ್ಸಾಂನ ಉದಯೋನ್ಮುಖ ಗಾಯಕಿ ನಹೀದ್ ಅಫ್ರೀನ್ ಭಯೋತ್ಪಾದನಾ ಕೃತ್ಯಗಳ ವಿರುದ್ಧ ಜಾಗೃತಿ ಮೂಡಿಸುವ ಹಾಡುಗಳನ್ನು ಹಾಡಿದ್ದಳು. ಇದರ ವಿರುದ್ದ 42 ಮುಸ್ಲಿಮ್ ಮೌಲ್ವಿಗಳು ಫತ್ವಾ ಹೊರಡಿಸಿದ್ದರು. ಈಕೆ ಅಸ್ಸಾಂ ಕಾಲೇಜ್‍ನಲ್ಲಿ ಭಯೋತ್ಪಾದನಾ ಸಂಘಟನೆ ನಡೆಸುತ್ತಿರುವ ದೌರ್ಜನ್ಯಗಖ ವಿರುದ್ಧ ಗೀತೆಗಳನ್ನು ಹಾಡಿರುವುದೇ ಭಯೋತ್ಪಾದಕ ಮೆಂಟಾಲಿಟಿಯ ಮೌಲ್ವಿಗಳಿಗೆ ಸರಿ ಕಾಣಲಿಲ್ಲ. ಈ ಸಭೆ ಶರಿಯಾದ ಚೌಕಟ್ಟಿಗೆ ವಿರುದ್ಧ ಇದರಿಂದ ನಮ್ಮ ಪೀಳಿಗೆ ಹೊರಗಿನ ಆಕರ್ಷಣೆಗಳಿಗೆ ಒಳಗಾಗುವ ಸಾಧ್ಯತೆ ಇದೆ ಎಂದು ಆಕೆಯ ವಿರುದ್ಧ ಫತ್ವಾ ಹೊರಡಿಸಲಾಗಿತ್ತು. ಕೊನೆಗೆ ಅಸ್ಸಾಂ ಸರಕಾರ ಆಕೆಗೆ ರಕ್ಷಣೆ ಒದಗಿಸಬೇಕಾಯಿತು.

ಇಸ್ಲಾಂ ಧರ್ಮದ ಅನಾಚಾರಗಳನ್ನು, ಮುಸ್ಲಿಂ ಮಹಿಳೆಯರ ಸ್ಥಿತಿಗತಿಯನ್ನು ಯಥಾವತ್ತಾಗಿ ಬರೆಯುತ್ತಿದ್ದ ಲೇಖಕಿ ತಸ್ಲೀಮಾ ನಸ್ರೀನ್ ವಿರುದ್ಧ ಬಾಂಗ್ಲಾ
ಮೂಲಭೂತವಾದಿಗಳು ಫತ್ವಾ ಹೊರಡಿಸಿದ್ದರು. ಈ ಫತ್ವಾ ಸಾಕಷ್ಟು ಗದ್ದಲ ಸೃಷ್ಟಿಸಿದ್ದು, ನಸ್ರೀನಾಗೆ ಕೊಲೆಬೆದರಿಕೆ ಬಂದಿತ್ತು. ತಸ್ಲೀಮಾ ಜೀವ ಉಳಿಸಲು ಕೊನೆಗೆ ಭಾರತದಲ್ಲಿ ಆಶ್ರಯ ಪಡೆಯಬೇಕಾಯಿತು. ಆದರೂ ಆಕೆಯನ್ನು ಮುಗಿಸಿ ಬಿಡುವ ಅನೇಕ ವಿಫಲ ಯತ್ನಗಳೂ ನಡೆದಿದ್ದವು.

`ಭಾರತ್ ಮಾತಾ ಕಿ ಜೈ’ ಎಂಬ ಘೋಷಣೆ ಕೂಗುವುದು ಇಸ್ಲಾಂ ಧಾರ್ಮಿಕ ನಿಲುವಿಗೆ ವಿರುದ್ಧವಾದದ್ದು ಎಂದು ಹೈದ್ರಾಬಾದ್‍ನ ಉನ್ನತ ಇಸ್ಲಾಮಿಕ್ ಸೆಮಿನರಿ
ಜಾಮಿಯಾ ನಿಝಾಮಿಯಾ ಭಾರತ್ ಮಾತಾ ಕೀ ಜೈ ಘೋಷಣೆ ವಿರುದ್ಧ ಫತ್ವಾ ಹೊರಡಿಸಿತ್ತು. ಭಾರತ್ ಮಾತಾ ಕೀ ಜೈ ಘೋಷಣೆ ಕೂಗುವುದನ್ನು ಇಸ್ಲಾಂ
ನಿಷೇಧಿಸಿದೆ. ಅಲ್ಲದೇ ಇದು ಇಸ್ಲಾಂಗೆ ವಿರುದ್ಧವಾದದ್ದು, ಮನುಷ್ಯರು ಮಾತ್ರ ಮನುಷ್ಯರಿಗೆ ಜನ್ಮ ನೀಡಲು ಸಾಧ್ಯ. ನೆಲವು ಜನ್ಮದಾತೆ ಆಗಲು ಸಾಧ್ಯವಿಲ್ಲ. ಭಾರತ ಭೂಮಿ ಎಂದು ಪೂಜಿಸುವುದು ವೈಯಕ್ತಿಕ ನಂಬಿಕೆ. ಆದರೆ ನಮಗೆ ಹಾಗೆ ಜನ್ಮಭೂಮಿ ಎಂದು ಪರಿಗಣಿಸಲು ಧಾರ್ಮಿಕ ನೆಲೆಯಲ್ಲಿ ಅಸಾಧ್ಯ ಎಂದು ಸೆಮಿನರಿ ಫತ್ವಾ ಕೇಂದ್ರದ ಮುಖ್ಯಸ್ಥ ಮುಫ್ತಿ ಅಝೀಮುದ್ದೀನ್ ವಿವರಣೆ ನೀಡಿದ್ದ.

ಮೀರತ್‍ನ ತಲೆಕೆಟ್ಟ ಮೌಲ್ವಿಯೊಬ್ಬ ಬಾಲಿವುಡ್ ನಟರಾದ ಶಾರುಖ್ ಖಾನ್, ಸಲ್ಮಾನ್ ಖಾನ್ ಹೆಸರನ್ನು ತಮ್ಮ ಮಕ್ಕಳಿಗೆ ಇಟ್ಟವರ ವಿರುದ್ಧ ಫತ್ವಾ ಹೊರಡಿಸಿದ್ದ. ಆದರೆ ಈ ಫತ್ವಾದ ಬಗ್ಗೆ ಯಾರೂ ಕ್ಯಾರ್ ಮಾಡಲಿಲ್ಲ.

ಶಾರ್ಟ್ ಸ್ಕರ್ಟ್ ಧರಿಸಿ ಟೆನಿಸ್ ಆಡುವ ಟೆನಿಸ್ ತಾರೆ ಸಾನಿಯಾ ಮಿರ್ಜಾ ವಿರುದ್ಧ ಧರ್ಮಗುರು ಹಸೀಬುಲ್ ಹಸನ್ ಸಿದ್ದೀಕಿ ಫತ್ವಾ ಹೊರಡಿಸಿದ್ದ. ಆದರೆ ಈ ಫತ್ವಾದ ವಿರುದ್ಧ ಸಿದ್ದೀಕಿ ವಿರುದ್ಧ ಜಗತ್ತಿನಾದ್ಯಂತ ಉಗಿದಿದ್ದರು. ಶಾರ್ಟ್ ಸ್ಕರ್ಟ್ ಧರಿಸದೆ ಬುರ್ಖಾ ಧರಿಸಿ ಟೆನಿಸ್ ಆಡಲು ಸಾಧ್ಯವೆ ಎಂದು ಸಾಕಷ್ಟು ಚರ್ಚೆ ನಡೆದಿತ್ತು. ಆದರೆ ಇಂದಿಗೂ ಸಾನಿಯಾ ಮಿರ್ಜಾ ಬುರ್ಖಾ ಧರಿಸಿಕೊಂಡು ಟೆನಿಸ್ ಆಡುತ್ತಿಲ್ಲ.

ಮುತ್ತಾಹಿದ್ ಮಜ್ಲಿಸ್ ಇ ಅಲಾಮಾ ಎನ್ನುವ ಸಂಘಟನೆ ಮಕ್ಕಳಿಗೆ ಪೊಲೀಯೋ ಲಸಿಕೆ ಹಾಕಿಸುವುದಕ್ಕೂ ಫತ್ವಾ ಹೊರಡಿಸಿತ್ತು. ಪಲ್ಸ್ ಪೊಲಿಯೋ ಎನ್ನುವುದು
ಮುಸ್ಲಿಮರ ವೀರ್ಯ ಕುಂದಿಸಲು ಮಾಡಿದ ಯಹೂದಿಗಳು ಕಂಡುಹಿಡಿದ ವಿಷ ಎಂದು ಫತ್ವಾ ಹೊರಡಿಸಲಾಗಿತ್ತು. ಈ ಮಾತನ್ನು ನಂಬಿ ಪೊಲಿಯೋ ಹನಿ ಹಾಕಿಸದವರ ಮಕ್ಕಳು ಇಂದಿಗೂ ಪೊಲೀಯೋ ಪೀಡಿತರಾಗಿ ಅಂಗವಿಕಲರಾಗಿದ್ದಾರೆ.

ಮೆಸೆಂಜರ್ ಆಫ್ ಗಾಡ್ ಸಿನಿಮಾ ವಿವಾದಕ್ಕೆ ಗುರಿಯಾಗಿದ್ದು, ಇದಕ್ಕೆ ಮುಂಬೈ ಮೂಲದ ಸುನ್ನಿ ಮುಸ್ಲಿಂ ರಝಾ ಅಕಾಡೆಮಿ ಇರಾನಿಯನ್ ಸಿನಿಮಾ ನಿರ್ಮಾಪಕ ಮಜಿದ್ ಮಜಿದಿ ಹಾಗೂ ಖ್ಯಾತ ಸಂಗೀತ ಸಂಯೋಜಕ ಎ.ಆರ್.ರೆಹಮಾನ್ ವಿರುದ್ಧ ಫತ್ವಾ ಹೊರಡಿಸಿತ್ತು. ಸುನ್ನಿ ಸಮುದಾಯ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿ ಮಜಿದ್ ಸಿನಿಮಾವನ್ನು ಭಾರತದಲ್ಲಿ ಬಿಡುಗಡೆ ಮಾಡದಂತೆ ನಿಷೇಧ ಹೇರಬೇಕೆಂದು ಮನವಿ ಸಲ್ಲಿಸಿತ್ತು. ಪ್ರವಾದಿ ಹೇಳಿಕೆಯಂತೆ ಯಾವುದೇ ದೃಶ್ಯ ಅಥವಾ ಚಿತ್ರವನ್ನು ರಚಿಸುವಂತಿಲ್ಲ. ಈ ಸಿನಿಮಾದಲ್ಲಿ ಇಸ್ಲಾಂ ಅನ್ನು ಅಪಹಾಸ್ಯ ಮಾಡಿದೆ. ಸಿನಿಮಾದ ಟೈಟಲ್ ಬಗ್ಗೆಯೂ ಫತ್ವಾದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದು, ಸಿನಿಮಾದಲ್ಲಿ ಪ್ರವಾದಿ ಅವರನ್ನು ಅವಹೇಳನ ಮಾಡಲಾಗಿದೆ. ಅಲ್ಲದೇ ಕೆಲವರು ಮುಸ್ಲಿಮೇತರರು ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ ಎಂದು ಫತ್ವಾ ಹೊರಡಿಸಲಾಗಿತ್ತು. ಮಜಿದ್ ಮಜಿದಿ ನಿರ್ದೇಶನದ ಈ ಸಿನಿಮಾದಲ್ಲಿ ಮ್ಯೂಸಿಕ್ ಎಆರ್ ರೆಹಮಾನ್ ಅವರದ್ದಾಗಿದ್ದು, ಅವರು ಇಸ್ಲಾಮನ್ನು ಧೂಷಣೆ ಮಾಡಿದ್ದಾರೆ. ಪ್ರವಾದಿಯ ಮದುವೆ ಕುರಿತಂತೆ ಮಜಿದ್ ಹಾಗೂ ರೆಹಮಾನ್ ಮತ್ತೆ ಕಲ್ಮಾ(ದೇವರ ಸ್ತೋತ್ರ) ವನ್ನು ಮತ್ತೊಮ್ಮೆ ಓದಿ ತಿಳಿದುಕೊಳ್ಳಲಿ ಎಂದು ಫತ್ವಾದಲ್ಲಿ ಹೇಳಲಾಗಿತ್ತು.

ಉತ್ತರಪ್ರದೇಶದ ಬರೇಲಿಯ ಮುಸ್ಲಿಂ ಧಾರ್ಮಿಕ ಸಂಘಟನೆಯೊಂದು ಬಾಡಿಗೆ ತಾಯಂದಿರ ಮೂಲಕ ಮಕ್ಕಳನ್ನು ಪಡೆಯುವುದು ಹಾಗೂ ಪ್ರನಾಳ ವಿಧಾನದ ಮೂಲಕ ಮಕ್ಕಳನ್ನು ಪಡೆಯುವುದನ್ನು ವಿರೋಧಿಸಿ ಫತ್ವಾ ಹೇರಿತ್ತು. ಬರೇಲಿ ಮರ್ಕಾಜ್‍ನ ದಾರೂಲ್ ಇಫ್ತಾ ಈ ಫತ್ವಾ ಹೊರಡಿಸಿದ್ದು, ಅನೈಸರ್ಗಿಕ ವಿಧಾನಗಳ ಮೂಲಕ ಮಕ್ಕಳನ್ನು ಪಡೆಯುವುದು ಇಸ್ಲಾಂಗೆ ವಿರೋಧಿಯಾಗಿದೆ. ಮಕ್ಕಳಿಲ್ಲದ ದಂಪತಿ ಬಾಡಿಗೆ ಗರ್ಭ ಅಥವಾ ಪ್ರನಾಳ ಶಿಶು ವಿಧಾನದ ಮೂಲಕ ಮಕ್ಕಳನ್ನು ಹೊಂದಬಹುದೇ ಎಂದು ಎತ್ತಿದ್ದ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ ಬರೇಲಿ ಮರ್ಕಾಜ್ ಈ ಫತ್ವಾ ಹೊರಡಿಸಿತ್ತು.

ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಅಸೆಂಬ್ಲಿಯಲ್ಲಿ ವಿಶ್ವಾಸಮತ ಗೆದ್ದ ಬಳಿಕ, ಬಿಹಾರದ ಸಚಿವ ಖುರ್ಷಿದ್ ಅವರು, ಅಸೆಂಬ್ಲಿ ಹೊರಗೆ ನಿಂತು `ಜೈ ಶ್ರೀರಾಮ್’ ಎಂದು ಕೂಗಿ ಹರ್ಷ ವ್ಯಕ್ತಪಡಿಸಿದ್ದರು. ಖುರ್ಷಿಕ್ ಅವರ ನಡವಳಿಕೆಯಿಂದ ಗರಂ ಆದ ಇಮ್ರಾತ್ ಶಾರಿಯಾರ್‍ನ ಮುಫ್ತಿ ಸೊಹೈಲ್ ಕ್ವಾಸ್ಮಿ ಎಂಬ ಸಾಮಾಜಿಕ -ಧಾರ್ಮಿಕ ಸಂಘಟನೆಯೊಂದು ಖುರ್ಷಿದ್ ವಿರುದ್ಧ ಫತ್ವಾ ಹೊರಡಿಸಿತ್ತು.

ಬೇರೊಬ್ಬ ಮೌಲ್ವಿಯ ಉಪದೇಶವನ್ನು ಆಲಿಸಿದ ಕಾರಣಕ್ಕಾಗಿ ಕಾರವಾರದ ಚಿತ್ತಾಕುಲದ ಮಾಲ್ದಾರವಾಡದ ಗ್ರಾಮದಲ್ಲಿ 12 ಮುಸ್ಲಿಂ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಿ ಮೌಲ್ವಿಯೊಬ್ಬಫತ್ವಾ ಹೊರಡಿಸಿದ್ದ. ಗ್ರಾಮದ ಅನ್ವರ್ ಮಹಮದ್ ಖಾನ್, ಅಬ್ದುಲ್ ಸಲಾಂ ಸೇರಿದಂತೆ 12 ಕುಟುಂಬಗಳು ಆಂಧ್ರಪ್ರದೇಶದ ದಾವಲ್-ಅಲಿ-ಶಾಹಾರ್ ಎಂಬ ಮೌಲ್ವಿಯ ಉಪದೇಶವನ್ನು ಕೇಳಿ ಅವರನ್ನು ಅನುಸರಿಸುತ್ತಿದ್ದರು. ಈ ಕಾರಣದಿಂದಾಗಿ ಚಿತ್ತಾಕುಲದ ಮಸೀದಿ ಹಾಗೂ ಮಸೀದಿಯ ಸಮಿತಿ, 12 ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಿ ಫತ್ವಾ ಹೊರಡಿಸಿ, ಬಹಿಷ್ಕಾರಗೊಂಡಿರುವ ಕುಟುಂಬಗಳು ಯಾವುದೇ ಕಾರ್ಯಕ್ರಮಗಳಿಗೆ ಬರದಂತೆ ಫತ್ವಾ ಹೊರಡಿಸಿದ್ದ.

ಬಿಜೆಪಿ ಪಕ್ಷಕ್ಕೆ ಮತ ಹಾಕಬೇಡಿ ಎಂದು ಮೌಲ್ವಿ ಅಬ್ದುಲ್ ಮಸೂದ್ ಎಂಬಾತ ಫತ್ವಾ ಹೊರಡಿಸಿದ್ದ.

‘ಛಾಯಾಚಿತ್ರ ತೆಗೆಸಿಕೊಳ್ಳುವುದು ಇಸ್ಲಾಂ ವಿರೋಧಿ. ಗುರುತು ಪತ್ರ ಮತ್ತು ಪಾಸ್‍ಪೆÇೀರ್ಟ್ ಮಾಡಿಸಿಕೊಳ್ಳಲು ಹೊರತು ಪಡಿಸಿ ಬೇರೆ ಯಾವುದೇ ಉದ್ದೇಶಕ್ಕೂ ಛಾಯಾಚಿತ್ರಗಳನ್ನು ತೆಗೆಸಿಕೊಳ್ಳಬಾರದು,” ಎಂದು ದರೂಲ್ ಉಲೂಮ್ ದಿಯೋಬಾಂದ್‍ನ ಮೊಹತಮೀಮ್ (ಉಪಕುಲಪತಿ) ಮುಫ್ತಿ ಅಬ್ದುಲ್ ಕಾಸಿಂ ನೊಮನಿ ಫತ್ವಾ ಹೊರಡಿಸಿದ್ದ. ಆದರೆ ಮುಸ್ಲಿಮರ ಪವಿತ್ರ ಯಾತ್ರಾಸ್ಥಳ ಮೆಕ್ಕಾದಲ್ಲಿ ಛಾಯಾಗ್ರಹಣಕ್ಕೆ ಅನುವು ಮಾಡಿಕೊಡಲಾಗಿದೆ. ಅಲ್ಲದೆ ಅಲ್ಲಿ ನಡೆಯುವ ನಮಾಜ್ ಅನ್ನು ಇಸ್ಲಾಮಿಕ್ ಚಾನೆಲ್‍ಗಳು ನೇರ ಪ್ರಸಾರ ಮಾಡುತ್ತಿವೆ. ಹೀಗಿದ್ದಾಗಲೂ ದಿಲ್ಲಿಯ ನೊಮೆನಿ ಯಾರೂ ಫೆÇಟೊ ತೆಗೆಸಿಕೊಳ್ಳದಿರುವಂತೆ ಫತ್ವಾ ಹೊರಡಿಸಿರುವುದು ಹಾಸ್ಯಾಸ್ಪದವೆನಿಸಿತ್ತು.

ಫುಟ್ ಬಾಲ್ ನೋಡಬಾರದು, ಬಾಳೆ ಹಣ್ಣು, ಸೌತೆ ಕಾಯಿ ತಿನ್ನಬಾರದು, ಮುಸ್ಲಿಂ ಹುಡುಗಿಯರಿಗೆ ಹತ್ತು ವರ್ಷದೊಳಗಡೆ ಮದುವೆ ಮಾಡಿಸಬೇಕು. ಉದ್ಯೋಗಸ್ಥ ಮಹಿಳೆಯರು ಪುರುಷ ಸಹೋದ್ಯೋಗಿಗಳೊಂದಿಗೆ ಬೆರೆಯುವಂತಿಲ್ಲ. ಸ್ತ್ರೀಯರು ಬುರ್ಖಾ ಧರಿಸಲೇಬೇಕು. ಮಹಿಳೆಯರು ಖಾಜಿ ಅಥವಾ ನ್ಯಾಯಾಧೀಶರಾಗಬಾರದು,. ಭಾವೀ ಪತ್ನಿ (ಪತಿ)ಯೊಂದಿಗೆ ಫೆÇೀನ್‍ನಲ್ಲಿ ಮಾತನಾಡಬಾರದು, 13 ವರ್ಷ ದಾಟಿದ ಬಾಲಕಿಯರು ಸೈಕಲ್ ಸವಾರಿ ಮಾಡಬಾರದು, ಮಹಿಳೆಯರು ಕಾರು ಚಲಾಯಿಸಬಾರದು, ಮಹಿಳೆಯರು ಚುನಾವಣೆಗೆ ಸ್ಪರ್ಧಿಸಕೂಡದು. ಟಿವಿಯಲ್ಲಿ ವ್ಯಂಗ್ಯಚಿತ್ರ ನೋಡಬಾರದು, ಮಾಡೆಲಿಂಗ್ ಮತ್ತು ಅಭಿನಯಗಳು ಅಪರಾಧ. ರಕ್ತದಾನ ಹಾಗೂ ಲಿಂಗಗಳ ದಾನ ನಿಷಿದ್ಧ. ಪ್ರವಾದಿ ಮಹಮ್ಮದರ ಬಗ್ಗೆ ನಿಂದನೆಯ ಮಾತು ಆಡಿದವರನ್ನು ಕೊಂದು ಹಾಕಬೇಕು, ಲೈಂಗಿಕ ಕ್ರಿಯೆಯ ವೇಳೆ ಗಂಡ-ಹೆಂಡತಿ ನಗ್ನರಾಗಬಾರದು, ಮುಸ್ಲಿಂ ತಾಯಂದಿರುವ ಕನಿಷ್ಠ ಐದು ಬಾರಿ ಪರಪುರಷರಿಗೆ ಎದೆಹಾಲು ಕುಡಿಸಬೇಕು, ಇದರಿಂದ ಆಕೆಗೆ ತಾಯಿಯ ಸ್ಥಾನ ಸಿಗುತ್ತದೆ ಹೀಗೆ ಸಾವಿರಾರು ವಿಚಿತ್ರ ತರದ ಫತ್ವಾಗಳನ್ನು ಹೊರಡಿಸಲಾಗಿದೆ.

ಪ್ಯಾರಿಸ್‍ನ `ಚಾರ್ಲಿ ಹೆಬ್ಡೋ’ ಪತ್ರಿಕಾ ಕಛೇರಿಯ ಮೇಲೆ ಮುಸ್ಲಿಂ ಭಯೋತ್ಪಾದಕರು ದಾಳಿ ನಡೆಸಿ ಸಂಪಾದಕರೂ ಸೇರಿದಂತೆ ಅನೇಕ ಪತ್ರಕರ್ತರನ್ನು ಕೊಂದು ಹಾಕಲು ಕಾರಣ ಇದೇ ಫತ್ವಾ ಅನ್ನುವುದನ್ನು ನಂಬಲೇಬೇಕು.

ಧರ್ಮ ಎನ್ನುವುದು ಮನುಷ್ಯನ ಬದುಕನ್ನು ಉತ್ತಮಗೊಳಿಸಲು ಇದೆ. ಆದರೆ ಮನುಷ್ಯನ ಬದುಕನ್ನೇ ಅಸಹನೀಯಗೊಳಿಸುವುದನ್ನು ಧರ್ಮ ಎನ್ನಲಾಗುವುದಿಲ್ಲ.

-ಅಶ್ರಫ್ ಅಬ್ಬಾಸ್

Tags

Related Articles

Close